//
you're reading...
ಪ್ರವಾಸ

ಶಾಸ್ತಾ ಲೇಕಿನಲ್ಲೊಮ್ಮೆ…

“I think this will sink by the time we get help. I think it will sink”, ನಾವಿದ್ದದ್ದು ಕನಿಷ್ಠ ನಾಲ್ಕು ನೂರು ಅಡಿ ಆಳದ ಶಾಸ್ತಾ ಲೇಕಿನಲ್ಲಿ, ಬೋಟಿನಲ್ಲಲ್ಲ, ನಿಜವಾಗಿ ಲೇಕಿನ ನೀರಿನಲ್ಲೇ. ಈಜು ಬಾರದ ನನ್ನಂಥವನನ್ನು ಬದುಕಿಸಿದ್ದು ಹಾಕಿಕೊಂಡಿದ್ದ ಲೈಫ್ ಜಾಕೇಟು. ಜೊತೆಗೆ ಕೈಗೆ ಆಸರೆ ಆಗಿದ್ದು ಬಾರಲು ಬಿದ್ದ ನಮ್ಮ ಜೆಟ್ ಸ್ಕೀ. ನಮಗೇನೂ ಅದು ಮುಳುಗುವದಿಲ್ಲ ಅಂತ ಅನಿಸಿದ್ದರೂ ಇವಳೀಗ ಒಮ್ಮಿಂದೊಮ್ಮೆಲೆ ಇದು ಮುಳುಗಿಹೋಗುತ್ತದೆ ಅಂದರೆ ಮಾಡುವದಾದರೂ ಎನು? ಹುಂಬತನ ದಡ್ಡತನಗಳೆಲ್ಲ ಒಂದೇ ಕಡೆ ಮೇಳೈಸಿದರೆ ಏನಾಗಬಹುದೋ ಅದಾಗಿತ್ತು ಅವತ್ತು. ೧೯೯೯ರ ಮೆಮೋರಿಯಲ್ ಡೇ ವೀಕೇಂಡು ಅಮೇರಿಕದಲ್ಲಿ ನನ್ನ ಮೊದಲ ಪ್ರವಾಸ, ಪ್ರಯಾಸವೂ ಹೌದು.

ಗೆಳೆಯ ಮತ್ತು ಗೆಳೆಯನ ಗೆಳೆಯರ ಜೊತೆ ಮೌಂಟ್ ಶಾಸ್ತಾ ನೋಡಲು ಹೋಗಿದ್ದೆವು. ಅಲ್ಲೇ ಹತ್ತಿರದ ವಿಶಾಲವಾದ ಶಾಸ್ತಾ ಲೇಕು ನಮ್ಮನ್ನು ನೀರಾಟಕ್ಕೆ ಕರೆದಿತ್ತು. ಎರಡು ಜೆಟ್ ಸ್ಕೀಗಳನ್ನು ಬಾಡಿಗೆ ತೆಗೆದುಕೊಂಡು ಒಂದೊಂದರಲ್ಲಿ ಇಬ್ಬಿರಂತೆ ಹತ್ತಿದೆವು. ಹತ್ತುವ ಮುಂಚೆ ಜೀವ(ರಕ್ಷಣಾ)ಕವಚ ಹಾಕಿ(ಸಿ)ಕೊಂಡು, ಬಾಡಿಗೆ ಕೊಟ್ಟವರು ಕೊಟ್ಟ ನಿರ್ದೇಶನಗಳಿಗೆ ತಲೆ ಆಡಿಸಿ ಹುಮ್ಮಸ್ಸಿನಿಂದ ಹೊರಟೆವು. ಒಬ್ಬರಿಗೊಬ್ಬರು ಸಾಥ್ ಕೊಟ್ಟು, ಒಬ್ಬರನ್ನೊಬ್ಬರು ದಾಟಿಕೊಂಡು ನೀರಿನಲ್ಲಿ ವೇಗವಾಗಿ ಹೊಗುವದೊಂದು ಥ್ರಿಲ್! ನಮ್ಮ ಸ್ಕೀಗಳಿಗೆ ಅಷ್ಟು ದೂರದಲ್ಲೊಂದು ಮೋಟಾರ್ ಬೋಟ್ ಹೋದರೆ ಅದರ ಅಲೆಗಳು ನಮ್ಮನ್ನು ಎತ್ತಿ ಇಳಿಸುತ್ತಿದ್ದವು. ನಾನು ಮೊದಲು ಹಿಂದೆ ಕುಳಿತಿದ್ದೆ. ನಂತರ ಸ್ವಲ್ಪ ಹೊತ್ತು ನನ್ನ ಡ್ರೈವಿಂಗ್. ನನ್ನ ಹಿಂದೆ ಕುಳಿತಾತನಿಗೆ ಬೋರ್ ಆಯಿತು ಅನಿಸುತ್ತದೆ ಅವ ಮುಂದೆ ಬರ್ತೀನಿ ಅಂದ. ಸರಿ ಅಲ್ಲಿಂದ ನಮ್ಮ ಸ್ಕೀ ಮತ್ತಷ್ಟು ವೇಗ ಪಡೆಯಿತು. ಆ ಕಡೆ ಈ ಕಡೆ ತಿರುಗುತ್ತ ನಡೆದಾಗ ಒಮ್ಮಿಂದೊಮ್ಮೆಲೇ ಆತ ವೇಗ ತಗ್ಗಿಸಿ, ನೀನು ಮೇಲೇ ಇರು, ನಾನು ಸ್ವಲ್ಪ ನೀರಿಗೆ ಹಾರುತ್ತೇನೆ! ನನಗೋ ಈಜು ಬರುವದಿಲ್ಲ, ಜೆಟ್ ಸ್ಕೀ ಒಂದನ್ನೇ ನನ್ನ ಕೈಯಲ್ಲಿ ಕೊಟ್ಟು ಅವ ನೀರಿಗಿಳಿದರೆ ಅವನನ್ನು ಮತ್ತೆ ಹತ್ತಿಸಿಕೊಳ್ಳುವದು ಹೇಗೆ? ಅದೂ ಅಲ್ಲದೇ ಎಲ್ಲ ಸ್ಕೀಗಳಿಗೂ ಅವನೇ ಸೆಕ್ಯುರಿಟಿ ಡೆಪಾಸಿಟ್ ಕೊಟ್ಟಿದ್ದಾನೆ, ೨೫೦ ಡಾಲರೋ ಏನೋ (ನನಗಿನ್ನೂ ಇಲ್ಲ ಕ್ರೆಡಿಟ್ ಕಾರ್ಡೂ ಇಲ್ಲ, ಬಂದು ಕೆಲವೇ ದಿವಸವಾದ್ದರಿಂದ ಬ್ಯಾಂಕಿನಲ್ಲಿ ದುಡ್ಡೂ ಅಷ್ಟಿಲ್ಲ). ಈಗೇನಪ್ಪ ಮಾಡುವದು ಅಂತ ಯೋಚಿಸುತ್ತಿದ್ದಾಗ ಯಾಕೋ ಅವ ಮನಸ್ಸು ಬದಲಾಯಿಸಿದ. ಮತ್ತೆ ವೇಗ ಪಡೆದುಕೊಂಡಿತು ನಮ್ಮ ಸ್ಕೀ.

ಮುಂದೆ ಸ್ವಲ್ಪ ಹೊತ್ತಿಗೆ ಅವನೊಬ್ಬನೇ ಅಲ್ಲ, ನಾನೂ ನೀರಿಗೆ ಬಿದ್ದಿದ್ದೆ!! ವೇಗವಾಗಿ ಹೋಗುತ್ತ ಒಮ್ಮಿಂದೊಮ್ಮೆಲೆ ಎಡಕ್ಕೆ ತಿರುಗಿಸಲಿಕ್ಕೆ ಪ್ರಯತ್ನಿಸಿದ ಗೆಳೆಯನನ್ನೂ, ನನ್ನನ್ನೂ ಪಕ್ಕದಲ್ಲಿ ಹಾದು ಹೋದ ಮೋಟಾರ್ ಬೋಟಿನ ವೇಗಕ್ಕೆ ಎದ್ದ ಅಲೆಯೊಂದು ಎತ್ತಿ ನೀರಿನೊಳಗಿಳಿಸಿತ್ತು. ೬-೭ ವರ್ಷದವನಿದ್ದಾಗ ಈಜು ಕಲಿಸುತ್ತೇನೆ ಅಂತ ನನ್ನ ಸೋದರಮಾವ ಕುಕನೂರಿನ ಗುಡಿ ಭಾವಿಯಲ್ಲಿ ಎತ್ತಿ ಒಗೆದ ನಂತರ ನಾನು ಬಿದ್ದದ್ದು ಈ ಶಾಸ್ತಾ ಲೇಕಿಗೇ ಇರಬೇಕು. ತಮಾಶೆಯೆಂದರೆ ಬೀಳುವಾಗ ನನ್ನ ಧ್ಯಾನವಿದ್ದದ್ದು ಕನ್ನಡಕ ಬೀಳಬಾರದು ಅಂತ. ಅಂತೂ ಲೈಫ ಜಾಕೆಟ್ಟಿನ ಪರೀಕ್ಷೆ ಮಾಡಿದ್ದೆ. ನಿಜಕ್ಕೂ ಅವು ಜೀವ ಉಳಿಸುತ್ತವೆ. ನೀರಿಗೆ ಬಿದ್ದ ನನ್ನ ತಲೆಯೂ ತೊಯ್ದಿರಲಿಲ್ಲ. ಸಾಮಾನ್ಯ ಜೆಟ್ ಸ್ಕೀ ಬಾಡಿಗೆ ತೆಗೆದುಕೊಂಡು ಹೋಗುವವರೆಲ್ಲ ನೀರಿಗಿಳಿಯುತ್ತಾರೆ, ಮತ್ತೆ ಏರಿ ಬರುತ್ತಾರೆ. ಅದೇನೂ ದೊಡ್ಡ ಮಾತಲ್ಲ. ಆದರೆ ಅವತ್ತು ನೀರಿಗೆ ಬಿದ್ದ ಮೇಲಿನ ಕತೆ ಒಂದು ಕಾಮಿಡಿ ಅಫ್ ಎರರ್ಸ್ ಅನ್ನಬಹುದು. ಬಿದ್ದವರು ಹತ್ತಿದೆವು ಮತ್ತೆ ಆದರೆ ಸರಿಯಾಗಿ ಹಿಂದಿನಿಂದ ಎರಡೂ ಕಡೆ ಸರಿ ಭಾರ ಹಾಕಿ ಮತ್ತೆ ನೀರಿಗೆ ಜಾರದಂತೆ ಹತ್ತಬೇಕಿದ್ದ ನಾನು ಅವಸರದಲ್ಲಿ ಕುದುರೆ ಏರಿದಂತೆ ಏರಹೋಗಿ ಮತ್ತೆ ನೀರಿಗೆ ಜಾರಿದ್ದೆ. ಈ ಬಾರಿ ಸ್ಕೀ ಎತ್ತಿ ನಿಲ್ಲಿಸಿದಾಗ ಅದರ ಮೋಟಾರ್ ಪಾರ್ಟಿಗೆಲ್ಲ ನೀರು ಹೋಗಿ ಅದನ್ನೀಗ ಸ್ಟಾರ್ಟ್ ಮಾಡಲು ಪ್ರಯತ್ನಿಸುವದು ಬೇಡ ಅನಿಸಿತು. ಮುಂದೆ? ತೀರಕ್ಕೆ ಹತ್ತಿರವಂತೂ ಇಲ್ಲ. ಯಾರಾದರೂ ಹೋಗಿ ನಮಗೆ ಬಾಡಿಗೆ ಕೊಟ್ಟಾತನಿಗೆ ಹೇಳಿದರೆ ಅವನು ಮೋಟಾರ್ ಬೋಟಿನಲ್ಲಿ ಬಂದು ನಮ್ಮನ್ನು ಕರೆದೊಯ್ಯುತ್ತಾನೆ. ಸರಿ ಹೋಗಿ ಹೇಳಿ ಬನ್ನಿ ಅಂತ ಜೊತೆಗಿದ್ದ ಗೆಳೆಯರಿಗೆ ಹೇಳಿದೆವು.

ಸರಿ ಹೇಳಿ ಬರುತ್ತೇವೆ ಅಂತ ಹೋದವರು ಎರಡೇ ನಿಮಿಷದಲ್ಲಿ ತಿರುಗಿದರು. ಬಂದವರೇ ಹೇಳಿದರು, ಬಹುಶಃ ಈಗ ನಿಮ್ಮನ್ನು ಟೋ ಮಾಡಲಿಕ್ಕೆ ಅವನು ದುಡ್ಡು ಕೇಳುತ್ತಾನೆ ಅದಕ್ಕೇ ನಾವೇ ನಿಮ್ಮನ್ನು ಟೋ ಮಾಡುತ್ತೇವೆ ಎಂದು ಹೇಳಿ ಅದೆಲ್ಲಿಂದಲೋ ಉದ್ದನೆಯ ಹಗ್ಗವೊಂದನ್ನು ತೆಗೆದು ನಮ್ಮ ಕೈಗೆ ಕೊಟ್ಟರು. ಅವರು ಮುಂದೆ ನಾವು ಹಿಂದೆ, ಮಧ್ಯ ಹಗ್ಗದ ಉದ್ದ ಹೆಚ್ಚಾಗಿ ನೀರಿಗಿಳಿದಿತ್ತು. ಅವರ ಸ್ಕೀ ಹಿಂಭಾಗದ ಚಿಕ್ಕ ಪ್ರೊಪೆಲ್ಲರಿನಲ್ಲಿ ಈ ಹಗ್ಗ ಸಿಕ್ಕಿಕೊಂಡಿತ್ತು.  ಈಗಂತೂ ನಾವೆಲ್ಲರೂ ಸಿಕ್ಕಿಕೊಂಡೆವು. ನಾನು ಮತ್ತು ನನ್ನ ಜೊತೆಗಿದ್ದವ ಇನ್ನೂ ನೀರಿನಲ್ಲೇ ಇದ್ದೆವು. ಈಗೇನು ಮಾಡುವದು ? ಸಾಕಷ್ಟು ಜನ ಆಡುತ್ತಿದ್ದಾರೆ ಅಲ್ಲಿ. ಅವರನ್ನೇ ಕೈ ಬೀಸಿ ಕರೆಯೋಣ ಎಂದು ಕೈ ಬೀಸ ತೊಡಗಿದರೆ ಅವರು ನಮಗೆ ವೇವ್ ಮಾಡಿ ಖುಶಿಯಿಂದ ನಗುತ್ತ ಹೊರಟು ಹೋಗುತ್ತಿದ್ದರು. ಅವರಿಗೇನು ಗೊತ್ತು ಪಾಪ ನಾವು ನೀರಿಗಿಳಿದದ್ದು ಬಯಸಿ ಅಲ್ಲವೆಂದು!

ಕೊನೆಗೊಮ್ಮೆ ಒಂದು ಗಂಡು ಹೆಣ್ಣು ಜೋಡಿಗೆ ನಾವು ಕಷ್ಟದಲ್ಲಿದ್ದೇವೆ ಎಂದು ತಿಳಿದು ಹತ್ತಿರ ಬಂದರು. ನಮ್ಮ ಕತೆ ಕೇಳಿದ ಮೇಲೆ ಆ ಹುಡುಗಿ ಹೇಳಿದ್ದು, “I think this will sink. Oh my god they won’t be able to hold on to it longer!” ಹೆದರಿದವರ ಮೇಲೆ ಕಪ್ಪೆ ಎಸೆಯುವದೆಂದರೆ ಇದೇ ಅಲ್ಲವೆ? ಪುಣ್ಯಕ್ಕೆ ಅವಳ ಗಂಡ/ಬಾಯ್ ಫ್ರೆಂಡ್ ಅವಳಿಗೆ ತಿಳಿಹೇಳಿದ. ನಮಗೂ ಧೈರ್ಯ ತುಂಬಿ ಮೋಟಾರ್ ಬೋಟ ತರಲು ನಮ್ಮ ಸ್ಕೀ ಮಾಲೀಕನಿಗೆ ಹೇಳುವದಾಗಿ ಹೇಳಿ ಹೋದ. ಅಂತೂ ಇಂತೂ ನೀರಿಗೆ ಬಿದ್ದು ೪೫ನಿಮಿಷಗಳಾದ ಮೇಲೆ ಮತ್ತೆ ನೀರಿನಿಂದ ಹೊರ ಬಂದಿದ್ದೆವು. ನಮ್ಮನ್ನು ಹೊತ್ತೊಯ್ಯಲು ಬಂದ ಮಾಲೀಕನ ಮೋಟಾರ್ ಬೋಟಿನಲ್ಲಿ ಮರಳುವಾಗ ಅವನು ಕೇಳಿದ ಪ್ರಶ್ನೆ ನಮ್ಮ ದಡ್ಡತನಕ್ಕೆ ಹಿಡಿದ ಕನ್ನಡಿಯಾಗಿತ್ತು. “ನಿಮಗೆ ಹೇಳಿದ್ದೆನಲ್ಲ ಮುಂದೆ ಕೆಂಪು ಫ್ಲೇರ್ಸ್ ಇದೆ ಯಾವುದಾದರೂ ತುರ್ತು ಪರಿಸ್ಥಿಗೆ ಉಪಯೋಗಿಸಿ ಅಂತ!”

Discussion

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.