//
you're reading...
ಪುಸ್ತಕ

ಚಿಕ್ಕ ಪುಸ್ತಕಗಳ ಸುತ್ತ

ಈಗೀಗ ಯಾಕೊ ಬರೀ ಚಿಕ್ಕ ಪುಸ್ತಗಳನ್ನಷ್ಟೇ ಓದಬೇಕು ಅನಿಸುವದು. ಹಲವು ನೂರು ಪುಟಗಳ ದಪ್ಪ ದಪ್ಪ ಪುಸ್ತಕಗಳನ್ನು ಓದುವದಕ್ಕೆ ಸಮಯ ಮತ್ತು ತಾಳ್ಮೆ ಎರಡೂ ಕಡಿಮೆಯಾದಂತಿವೆ. ಹೋದ ವರ್ಷ ಓದಿದ ’ಆವರಣ’ ಮತ್ತು ’ಕಾನೂರು ಸುಬ್ಬಮ್ಮ ಹೆಗ್ಗಡತಿ’ ಬಿಟ್ಟರೆ ಮತ್ತೊಂದು ಕಾದಂಬರಿ ಓದಿಲ್ಲ. ಕಾನೂರು ಹೆಗ್ಗಡತಿಯ ಮುನ್ನುಡಿಯಲ್ಲಿ ಕುವೆಂಪು ಹೇಳುತ್ತಾರೆ, ’ಊರಿಗೆ ಹೊಸದಾಗಿ ಬಂದವರು ನಿಧಾನವಾಗಿ ಊರಿನ ಮತ್ತು ಊರ ಜನರ ಪರಿಚಯ ಮಾಡಿಕೊಂಡಂತೆ ಈ ಕಾದಂಬರಿಯ ಪಾತ್ರಗಳ ಪರಿಚಯ ಮಾಡಿಕೊಳ್ಳದೇ ಬರೀ ಕತೆ ಓದುವದು ಪರ ಊರಿನ ರಸ್ತೆಗಳಲ್ಲಿ ಮೋಟಾರಿನಲ್ಲಿ ಸಂಚರಿಸಿ ಆ ಊರನ್ನು ನೋಡಿದೆ, ತಿಳಿದೆ ಎಂದುಕೊಂಡಂತೆ’. ಮೊದಮೊದಲು ಊರ ಮಂದಿಯ ಪರಿಚಯ ಮಾಡಿಕೊಳ್ಳುತ್ತಲೇ ಓದ ತೊಡಗಿದರೂ ಮುಂದೆ ಅಲ್ಲಲ್ಲಿ short cut ಹಾದಿ ಹಿಡಿದು, ಅಲ್ಲಿಂದಿಲ್ಲಿ ಜಿಗಿದು ಕತೆಯನ್ನೊಮ್ಮೆ ತಿಳಿದುಕೊಂಡೆ. ಅದಾದ ನಂತರ ಓದಿದ್ದು ಬರೀ ಮುಖ್ಯವೆನಿಸಿದ ಅಧ್ಯಾಯಗಳನ್ನ. ಒದಲಿನಿಂದ ಕೊನೆಯವರೆಗೂ ಕ್ರಮವಾಗಿ ಆ ಪುಸ್ತಕವನ್ನು ನಾನು ಓದುವದೇ ಇಲ್ಲವೇನೊ.

ಇದು ಬರಿ ಕನ್ನಡ ಪುಸ್ತಕಗಳಿಗಷ್ಟೇ ಸೀಮಿತವಾಗಿಲ್ಲ. ಇಂಗ್ಲೀಷಿನ ಕಾದಂಬರಿಯನ್ನೋದಿ ವರ್ಷಗಳೇ ಆದವು. ’ಡಾವಿಂಚಿ ಕೋಡ್’ ಓದಿದ ಮೇಲೆ ಮತ್ತೊಂದು ಓದಿಲ್ಲ. ’ಟಾಪ್ ಟೆನ್’, ’ಬೆಸ್ಟ್ ಸೆಲ್ಲರ್’ ಮುಂತಾದ ಲೇಬಲ್ಲುಗಳನ್ನು ನೋಡಿ ಮೊದ ಮೊದಲು ಮೋಸ ಹೋದಂತೆ ಅನಿಸಿದ್ದರಿಂದ ಈಗೀಗ ಬೆಸ್ಟ್ ಸೆಲ್ಲರ್ರುಗಳ ಉಸಾಬರಿಗೆ ಹೋಗುವದಿಲ್ಲ. ಎನ್.ಪಿ.ಆರ್ ನಲ್ಲಿ ಬರುವ ಫೋರಮ್ ಕಾರ್ಯಕ್ರಮ ಎಷ್ಟೋ ಬಾರಿ ಉತ್ತಮ ಪುಸ್ತಕಗಳ ಪರಿಚಯ ಮಾಡಿ ಕೊಟ್ಟಿದೆ. ಅದರಲ್ಲಿ ಕೇಳಿ ಓದಿದ್ದು ’ಬ್ಲಿಂಕ್’. ನನಗೆ ಬಹಳ ಮೆಚ್ಚಿಗೆಯಾದ ಪುಸ್ತಕ. ಮತ್ತೆ ಮತ್ತೆ ಓದುವ ಪುಸ್ತಕಗಳಲ್ಲಿ ಇದೂ ಒಂದಾಗಿದೆ.

ಇವಿಷ್ಟನ್ನು ಬಿಟ್ಟರೆ ಉಳಿದಂತೆ ಓದಿದ್ದೆಲ್ಲ ಚಿಕ್ಕ ಚಿಕ್ಕ ಪುಸ್ತಕಗಳನ್ನಷ್ಟೆ. ಒಮ್ಮೊಮ್ಮೆ ’ಭಾರತ-ಭಾರತಿ’ ಪುಸ್ತಕಗಳಿಂದ ಶುರುವಾದ ನನ್ನ ಓದುವ ಹವ್ಯಾಸ ಮತ್ತೆ ಅದೇ ಗಾತ್ರದ ಪುಸ್ತಕಗಳೆಡೆ ಹೊರಳಿದೆಯೇ ಅನಿಸುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಈಗೀಗ ಲೈಬ್ರರಿಯಲ್ಲಿ ಪುಸ್ತಕಗಳ ಗಾತ್ರವನ್ನು ನೋಡಿ ಪುಸ್ತಕವನ್ನು ಆರಿಸುತ್ತಿದ್ದೇನೆ!! ಆಕಸ್ಮಾತ್ತಾಗಿ ಸ್ವಲ್ಪ ದಪ್ಪನೆಯ ಪುಸ್ತಕವನ್ನೇನಾದರೂ ಆರಿಸಿದರೆ ಬಹುತೇಕ ಅದು ಚಿಕ್ಕ ಕತೆ ಅಥವ ಲೇಖನಗಳ ಸಂಕಲನವಾಗಿರುತ್ತದೆ. ಪುಸ್ತಕಗಳ ಗಾತ್ರಕ್ಕೂ ಅವುಗಳ ಓದು ಕೊಡುವ ತೃಪ್ತಿಗೂ ನೇರ ಸಂಬಂಧವೇನೂ ಇಲ್ಲವಲ್ಲವೆ? ಓದಿದ ಪುಸ್ತಕಗಳಲ್ಲಿ ಹಲವು ನನ್ನ ಸಂಗ್ರಹಕ್ಕೆ ಸೇರಿಸಿಕೊಳ್ಳುವಂತಿವೆ. ಆರೆಂಟು ತಿಂಗಳ ಹಿಂದೆ ಅಪ್ಪ ಭಾರತದಿಂದ ಕಳಿಸಿದ ’ಪಂಪಾ ಯಾತ್ರೆ’ (ವಿ.ಸಿ) ಸೇರಿದಂತೆ ಹಲವಾರು ಒಳ್ಳೆಯ ಪುಸ್ತಕಗಳನ್ನು ಓದಿದ್ದೇನೆ. ಹೆಮಿಂಗ್ವೇ ಬರೆದ ’ಓಲ್ಡ್ ಮ್ಯಾನ್ ಆಂಡ್ ದಿ ಸೀ’, ಸ್ಟೈನ್ಬೆಕ್ ಬರೆದ ’ದಿ ಪರ್ಲ್’, ಫ್ರೆಡ್ರಿಕ್ ಫೋರ್ಸಿತ್ತನ ’ದಿ ಶೆಪರ್ಡ್’, ಪೀಟರ್ ಡ್ರಕ್ಕರನ ’ದಿ ಅಡ್ವೆಂಚರ್ಸ ಆಫ್ ಎ ಬೈಸ್ಟಾಂಡರ್’, ಬಿ.ವಿ.ವೀರಭದ್ರಪ್ಪನವರ ಲೇಖನಗಳ ಸಂಕಲನ ’ವೇದಾಂತ ರೆಜಿಮೆಂಟ್’, ಮಾಸ್ತಿ ಅವರ ಸಣ್ಣಕತೆಗಳ ಮರು ಓದು, ಇತ್ಯಾದಿ. ಒಂದೊಂದು ಪುಸ್ತಕವೂ ಬೇರೆ ಬೇರೆ ಸ್ತರಗಳಲ್ಲಿ ತಟ್ಟಿವೆ. ಇವಿಷ್ಟರಲ್ಲಿ ’ದಿ ಶೆಪರ್ಡ್’ ಒಂದು ಬಿಟ್ಟರೆ ಉಳಿದೆಲ್ಲ ಪುಸ್ತಕಗಳು ಮತ್ತೆ ಮತ್ತೆ ಓದುವಂತಿವೆ.

ಲೈಬ್ರರಿಯ ಪುಸ್ತಕದ ಸಾಲುಗಳನ್ನು ಹಾಗೇ ಅವಲೋಕಿಸುತ್ತ ಅಲ್ಲೊಂದು ಇಲ್ಲೊಂದು ಪುಸ್ತಕವನ್ನು ಹೊರಗೆಳೆದು ನನ್ನ ಕುತೂಹಲವನ್ನು ಕೆರಳಿಸುವಂತಹ ಪುಸ್ತಕವೇ ಎಂದು ನೋಡುವದು ಖುಷಿ ಕೊಡುತ್ತದೆ. ಹಾಗೆ ನೋಡುವಾಗ ಎಷ್ಟೋ ಬಾರಿ ಒಮ್ಮೆಯೂ ಕೇಳಿಲ್ಲದ ಲೇಖಕರ ಪುಸ್ತಕವನ್ನು ತೆಗೆದುಕೊಂಡು ಬರುತ್ತೇನೆ. ಅವುಗಳಲ್ಲಿ ಕೆಲವು ಮನಸ್ಸಿನಲ್ಲಿ ಉಳಿಯುತ್ತವೆ. ಮುಂದೆ ಮತ್ತೆ ಅದೇ ಲೇಖಕರ ಪುಸ್ತಕಗಳನ್ನು ಹುಡುಕುವಂತೆ ಮಾಡುತ್ತವೆ. ಹೋದವಾರ ಲೈಬ್ರರಿಯಲ್ಲಿ ಮತ್ತೆ ಚಿಕ್ಕ ಪುಸ್ತಕಗಳನ್ನು ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ’ಸರಳತೆಯ ಕಾಯ್ದೆಗಳು’ (The Laws of Simplicity) . ಈ ಪುಸ್ತಕವನ್ನು ತಂದಿದ್ದಕ್ಕೆ ಕಾರಣ ಅದರ ಸುಂದರವಾದ ಹೊದಿಕೆ, ಕುತೂಹಲ ಹುಟ್ಟಿಸಿದ ಹೆಸರು, ಪರಿವಿಡಿ ಹಾಗೂ ಮುಖ್ಯವಾಗಿ ಒಂದು ಅಥವ ಎರಡು ಸಿಟ್ಟಿಂಗಿನಲ್ಲಿ ಓದಬಹುದು ಎನಿಸುವ ಗಾತ್ರ. ಒಂದು ಕಾರು ಮತ್ತು ಡಿಜಿಟಲ್ ಕ್ಯಾಮರಗಳ ಗಾತ್ರಕ್ಕೂ ಹಾಗೂ ಅವುಗಳ ಮ್ಯಾನ್ಯುವಲ್ಲುಗಳ ಗಾತ್ರಕ್ಕೂ ವ್ಯತ್ಯಾಸವೆಷ್ಟಿರುತ್ತದೆ ಗಮನಿಸಿದ್ದೀರ? ಕಾರಿನ ಗಾತ್ರ ಹಾಗೂ ಸಂಕೀರ್ಣತೆಗೆ ಹೋಲಿಸಿದರೆ ಅದರ ಮ್ಯಾನ್ಯುವಲ್ ತೀರ ಚಿಕ್ಕದು ಮತ್ತು ಸರಳವಾದುದು ಅನಿಸುವದಿಲ್ಲವೇ? ಟೀವಿ, ಡಿವಿಡಿ ಪ್ಲೇಯರುಗಳ ರಿಮೋಟುಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಬಟನ್ನುಗಳು ಇವೆ ಅನಿಸಿದೆಯೆ? ಗೂಗಲ್ಲಿನ ಬಹುತೇಕ ಬಿಳಿ ಬಣ್ಣದ ಜಾಲತಾಣ ಕೆಲವು ಕೊಂಡಿಗಳು ಹಾಗೂ ಒಂದು ಹುಡುಕುವ ಪಟ್ಟಿಯ ಹಿಂದೆ ಅದರ ಅತ್ಯದ್ಭುತ ಹುಡುಕಾಟದ ಇಂಜೀನನ್ನು ಹೇಗೆ ಅಡಗಿಸಿದೆ ನೋಡಿರುವಿರಾ? ಅದೇ ರೀತಿ ಐ-ಪಾಡಿನ ವಿನ್ಯಾಸ ಸರಳ ಮತ್ತು ಸುಂದರವಲ್ಲವೆ? ಇದನ್ನೆಲ್ಲ ಗಮನಿಸಿರಬೇಕಲ್ಲವೇ ನೀವೂ? ಜಾನ್ ಮೇಡಾ ಈ ಪುಸ್ತಕದಲ್ಲಿ ಹತ್ತು ನಿಯಮಗಳ ಮೂಲಕ ಹೇಗೆ ಸಂಕೀರ್ಣತೆಗಳ ಸಂತೆ ಸರಳವೂ ಆಗಬಹುದು ಎಂದು ಚರ್ಚಿಸುತ್ತಾನೆ. ನೆನಪಿರಲಿ ಸರಳವೆಂದರೆ ಸಾಧಾರಣವಲ್ಲ. ಯಾವುದನ್ನೇ ಸರಳಗೊಳಿಸಲು ಹೊರಟಾಗ ಎಚ್ಚರ ತೆಗೆದುಕೊಳ್ಳದಿದ್ದರೆ ಅದು ಸಾಧಾರಣವಾಗಿಬಿಡಬಹುದಾದ ಆಪತ್ತು ಇದೆ. ಅದರ ಬಗ್ಗೆ ಎಚ್ಚರಿಕೆಯೂ ಇದೆ ಪುಸ್ತಕದಲ್ಲಿ.

ಈ ಪುಸ್ತಕವನ್ನೋದಿದ ಮೇಲೆ ನನ್ನ ಚಿಕ್ಕ ಪುಸ್ತಕಗಳ ಹುಡುಕಾಟವೂ ಒಂದು ರೀತಿಯಲ್ಲಿ ಜಾನ್ ಮೆಡಾ ಹೇಳುವ ’ಅನವಶ್ಯಕವಾದದ್ದನ್ನು ಕಡಿಮೆ ಮಾಡಿ, ಮೌಲ್ಯವನ್ನು ಹೆಚ್ಚು ಮಾಡುವ’ ಕೆಲಸವಾಗಿ ಕಾಣುತ್ತಿದೆ. ಓದಿದ ಪುಸ್ತಕಗಳ ಗಾತ್ರ ಚಿಕ್ಕದಾಗಿರಬಹುದು. ಅದಕ್ಕೆ ತಕ್ಕಂತೆ ಅವುಗಳಲ್ಲಿ ಹತ್ತು ಹಲವು ಪಾತ್ರಗಳ ಒಡನಾಟ ಇಲ್ಲದಿರಬಹುದು. ಆದರೆ ಈ ಪುಸ್ತಕಗಳಿಂದ ನನ್ನ ಅರಿವಿಗೆ ಬಹಳಷ್ಟು ಹೊಸತು ಸೇರಿಕೊಂಡಿದೆ. ಒಂದು ಸಣ್ಣ ಕತೆಯ ಹರವು ಕಡಿಮೆ ಆದರೆ ಅದು ಮುಟ್ಟುವ ವಿಷಯಗಳನ್ನು ತೀವ್ರವಾಗಿ ಹೇಳುತ್ತವೆ. ಕೆಲವೇ ಸಂದರ್ಭಗಳ ಗಾಢ ಚಿತ್ರಣವನ್ನು ನೀಡಿ ಚಿಂತನೆಗೆ ಹಚ್ಚುತ್ತದೆ. ಇಲ್ಲಿಯವರೆಗೂ ಚಿಕ್ಕ ಪುಸ್ತಗಳ ಲೋಕದಿಂದ ಲಾಭವೇ ಆಗಿದೆ. ಅದರಲ್ಲಿ ಇನ್ನೂ ಓದಬೇಕು ಅನಿಸಿದ್ದು ಬಹಳಷ್ಟಿದೆ. ಎಷ್ಟೋ ಪ್ರಸಿದ್ಧ ಸಣ್ಣ ಕತೆಗಾರರನ್ನು ನಾನು ಓದಿಯೇ ಇಲ್ಲ. ಉದಾಹರಣೆಗೆ, ಖಾಸನೀಸರ ಕತೆಗಳನ್ನು ಒಂದೂ ಓದಿಲ್ಲ, ಓದಬೇಕೆನಿಸಿದೆ. ಮುಂದಿನ ಭಾರತ ಪ್ರವಾಸದಲ್ಲಿ ಹುಡುಕಬೇಕೆಂದುಕೊಂಡಿದ್ದೇನೆ. ಚಿಕ್ಕ ಪುಸ್ತಕಗಳ ದೊಡ್ಡ ಲೋಕದಲ್ಲಿ ನಿಮಗೆ ಮೆಚ್ಚುಗೆಯಾದ ಪುಸ್ತಕಗಳಿದ್ದರೆ ದಯವಿಟ್ಟು ತಿಳಿಸಿ.

Discussion

No comments yet.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.